ಬೆಳಗಾವಿ ಡಿಸಿ ಕಚೇರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಬ್ಬು ದರ ನಿಗದಿ ಕುರಿತು ಮಹತ್ವದ ಸಭೆ ಆರಂಭವಾಗಿದ್ದು, ಇಂದು ಕಬ್ಬಿನ ಬೆಲೆ ಘೋಷಣೆಯಾಗುವ ಸಾಧ್ಯತೆಯಿದೆ.
ಬೆಳಗಾವಿ: ಕಬ್ಬು ಕತ್ತರಿಸುವ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ, ರೈತರ ದೀರ್ಘಕಾಲದ ಬೇಡಿಕೆಯಾದ ಕಬ್ಬಿನ ಬೆಲೆ ನಿಗದಿ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕ್ಲೈಮಾಕ್ಸ್ ಹಂತದ ಮಹತ್ವದ ಸಭೆ ಆರಂಭವಾಗಿದೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತ ಮುಖಂಡರ ನಡುವಿನ ಬಿಕ್ಕಟ್ಟಿಗೆ ತೆರೆ ಎಳೆಯಲು ಈ ಸಭೆಯನ್ನು ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಸಭೆಯಲ್ಲಿ ಇಂದು ಸಂಜೆ ವೇಳೆಗೆ ಕಬ್ಬಿನ ದರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಪ್ರಮುಖ ಮುಖಂಡರು ಮತ್ತು ಅಧಿಕಾರಿಗಳ ಭಾಗಿ:
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಶಾಸಕ
ರಾಜು ಸೇಠ್, ಪ್ರಭಾರ ಜಿಲ್ಲಾಧಿಕಾರಿ
ರಾಹುಲ್ ಶಿಂಧೆ, ಬೆಳಗಾವಿ ವಲಯ ಐಜಿಪಿ
ಸಂದೀಪ್ ಪಾಟೀಲ್, ನಗರ ಪೊಲೀಸ್ ಕಮೀಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಮುಖಂಡರ ಗೈರುಹಾಜರಿ:
ಮಹತ್ವದ ಸಭೆ ನಡೆಯುತ್ತಿದ್ದರೂ, ಪ್ರಮುಖ ರೈತ ಮುಖಂಡರಾದ
ಚೂನಪ್ಪ ಪೂಜಾರಿ ಹಾಗೂ
ಶಶಿಕಾಂತ ಗುರೂಜಿ ಅವರು ಇಂದಿನ ಸಭೆಯಿಂದಲೂ ದೂರ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
"ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಕಾರ್ಖಾನೆಗಳ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ವಸಮ್ಮತಿಯ ವೈಜ್ಞಾನಿಕ ಬೆಲೆಯನ್ನು ಇಂದೇ ಅಂತಿಮಗೊಳಿಸಲಾಗುವುದು" ಎಂದು ಆಡಳಿತಾತ್ಮಕ ಮೂಲಗಳು ತಿಳಿಸಿವೆ.